Swaagatam

स्वागतम्

Wednesday, March 4, 2009

ರಾಮಾಯಣದ ಅಸ್ತಿತ್ವವನ್ನು ಕುರಿತು.......

ರಾಮಾಯಣವು ಇತಿಹಾಸ ಗ್ರಂಥಗಳಲ್ಲೊಂದು ಎಂಬ ಹೇಳಿಕೆ ಹಿಂದಿನ ಕಾಲದಿಂದಲೂ ಇದೆ. ಎಲ್ಲ ಸಂಸ್ಕೃತ ಗ್ರಂಥಗಳಲ್ಲಿಯೂ ಹೀಗೆಯೇ ಅದರ ಉಲ್ಲೇಖವಾಗಿದೆ. ಇತಿಹಾಸ ಎಂಬುದರ ಅರ್ಥ ಇತಿ ಹ ಆಸ ಎಂದು ನಿರುಕ್ತದಲ್ಲಿ ಹೇಳಿದೆ.ಆದ್ದರಿಂದಲೇ, ನಡೆದಿದ್ದನ್ನು ನಿರೂಪಿಸುವ ಗ್ರಂಥವೇ ಇತಿಹಾಸ ಎಂದು ಕರೆಸಿಕೊಳ್ಳುತ್ತದೆ. ಪುರಾಣಗಳು ಇಂತಹವುಗಳಲ್ಲ.

ಆದರೆ, ಆಧುನಿಕರು ಇದಕ್ಕೆ ಇಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅವರ ದೃಷ್ಟಿಯಲ್ಲಿ ರಾಮಾಯಣವು ಐತಿಹಾಸಿಕ ಗ್ರಂಥವಲ್ಲ. ಹಾಗಾಗಿ, ರಾಮನು ಇದ್ದ ಎಂಬುದರ ಬಗೆಗೆ ಅವರಿಗೆ ಆಧಾರ ಬೇಕಾಗಿದೆ. ಆಧಾರಸಮೇತ ನಿರೂಪಿಸಿದರೂ ಅವರು ಒಪ್ಪುವುದಿಲ್ಲ ಎಂಬುದು ಬೇರೆ ಮಾತು !

ದೂರದರ್ಶನದ ಝೀವಾಹಿನಿಯವರು ಇತ್ತೀಚೆಗೆ ಚಿತ್ರಕೂಟ ಮತ್ತು ಶ್ರೀಲಂಕಾಕ್ಕೆ ಹೋಗಿ ರಾಮಾಯಣದ ಘಟನೆಗಳಿಗೆ ಸಂಬಂಧಪಟ್ಟ ಸ್ಥಳಗಳ ಪರಿಶೀಲನೆ ನಡೆಸಿದರು. ಅವರು ಸಿದ್ಧಪಡಿಸಿದ ವರದಿಯಲ್ಲಿನ ಕೆಲವು ಕೂತೂಹಲಕಾರಕ ಸ್ಥಳಗಳ ಬಗೆಗಿನ ವಿವರಗಳು ಇಲ್ಲಿವೆ.

ಚಿತ್ರಕೂಟವು ವನವಾಸದಲ್ಲಿ ರಾಮ ಮುಂತಾದವರ ವಾಸಸ್ಥಾನವಾಗಿತ್ತು ಎಂಬುದು ಎಲ್ಲರಿಗೂ ತಿಳಿದೇ ಇದೆ. ಅಲ್ಲಿ ರಾಮನು ಮಲಗಿದ ಸ್ಥಳ, ರಾಮ ಮುಂತಾದವರ ಪಾದಚಿಹ್ನೆಗಳನ್ನು ಹೊಂದಿರುವ ಸ್ಫಟಿಕ ಶಿಲೆ ಮುಂತಾದವುಗಳಿವೆ. ಜಾನಕೀಕುಂಡ(ಚಿತ್ರ-೧)ಕ್ಕೆ ಹೋಗಲು ಇರುವ ದಾರಿಯೇ ಹವನವೀಥಿ. ಅಲ್ಲಿ ಸೀತೆಯು ದಿನವೂ ಸ್ನಾನ ಮುಗಿಸಿದ ಮೇಲೆ ಹೋಮ ಹವನಗಳನ್ನು ನಡೆಸುತ್ತಿದ್ದಳೆಂಬ ಪ್ರತೀತಿ ಇದೆ. ಇಲ್ಲಿ ದಿನವೂ ರಾಮಾಯಣ ಪಾರಾಯಣವು ಈಗಲೂ ದಿನವೂ ನಡೆಯುತ್ತದೆ ಎಂದುದು ವಿಶೇಷ.

ಚಿತ್ರಕೂಟದ ಸುತ್ತಲೂ ಕಾಮಾಖ್ಯ ಪರ್ವತಶ್ರೇಣಿಯಿದೆ. ಇಲ್ಲಿನ ಗುಹೆಯಲ್ಲಿ ಸೀತಾಕುಂಡವಿದೆ. ಅಲ್ಲಿ ದಿನವೂ ಸೀತೆಯು ದಿನವೂ ಸ್ನಾನ ಮಾಡುತಿದ್ದಳೆಂಬ ಕಥೆ ಕೇಳಿಬರುತ್ತದೆ. ಗೋದಾವರೀ ಜಲಧಾರೆ ಇಲ್ಲಿ ಕಾಣಲು ಸಿಗುತ್ತದೆ. ಆಶ್ಚರ್ಯವೆಂದರೆ ಗುಹೆಯನ್ನು ಪ್ರವೇಶಿಸಿದ ಈ ಜಲಧಾರೆ ಮುಂದೆ ಎಲ್ಲಿ ಹೋಗುತ್ತದೆ ಎಂಬ ವಿಷಯ ಯಾರಿಗೂ ತಿಳಿಯದು !

ಇಲ್ಲಿಂದ ಮುಂದೆ ೬೫೦ ಮೆಟ್ಟಿಲುಗಳನ್ನು ಏರಿದರೆ ಹನುಮಧಾರಾ (ಚಿತ್ರ-೨) ಇದೆ. ಅಲ್ಲಿ ಹನುಮಂತನ ಮೂರ್ತಿ ಕಾಣಸಿಗುತ್ತದೆ. ಲಂಕೆಯನ್ನು ಸುಟ್ಟು ಬಂದ ಹನುಮಂತನ ಶರೀರದ ತಾಪವನ್ನು ಹೋಗಲಾಡಿಸಲು ರಾಮನು ಬಾಣಪ್ರಯೋಗದಿಂದ ಜಲಧಾರೆಯನ್ನು ಉಂಟುಮಾಡಿದನೆಂಬ ಕಥೆ ಇದೆ. ಹನುಮಂತನ ಮೂರ್ತಿಯ ಮುಂದೆ ಬೆಟ್ಟದಿಂದ ಜಲಧಾರೆಯೊಂದು ಬೀಳುತ್ತದೆ. ಇಲ್ಲಿಯೂ ಈ ಜಲಧಾರೆ ಮುಂದೆ ಎಲ್ಲಿ ಹೋಗುತ್ತದೆಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಸೀತೆಯನ್ನು ಅಪಹರಿಸಿದ ರಾವಣನು ಅವಳನ್ನು ಲಂಕೆಯ ಅಶೋಕವನದಲ್ಲಿ ತಂದಿಟ್ಟನೆಂಬ ಕಥೆ ನಮಗೆ ತಿಳಿಯದ್ದೇನಲ್ಲ. ಈ ಸ್ಥಳ ಶ್ರೀಲಂಕಾದಲ್ಲಿದೆ. ಆ ಜಾಗದಲ್ಲೀಗ ರಾಮ, ಲಕ್ಷ್ಮಣ, ಸೀತೆ, ಆಂಜನೇಯರ ಪ್ರತಿಮೆಗಳು ಕಾಣಸಿಗುತ್ತವೆ(ಚಿತ್ರ-೩). ಆಶೋಕ ವೃಕ್ಷವಾದರೋ ಈಗ ಅಲ್ಲಿಲ್ಲ. ಅದು ಕಾಲದ ಮಹಿಮೆಯಿಂದ ನಶಿಸಿಹೋಯಿತು ಇನ್ನುತ್ತಾರೆ ಸ್ಥಳೀಯರು.

ಆದರೆ ನೂರಾರು ವರ್ಷಗಳ ಹಿಂದೆ ಹುಟ್ಟಿದ ಮರವೊಂದು ಅಲ್ಲಿ ರಾರಾಜಿಸುತ್ತಿದೆ. ಆದರೆ, ಆ ಪ್ರದೇಶವು ಶಿಲೆಗಳಿಂದ ಆವೃತವಾದ ಕಾರಣ ತಕ್ಷಣಕ್ಕೆ ಗೋಚರವಾಗುವುದಿಲ್ಲ.

ಇಲ್ಲಿಯೇ ಸೀತಾಝರಿ(ಚಿತ್ರ-೪) ಹರಿಯುತ್ತದೆ. ಅಶೋಕವನದಲ್ಲಿದ್ದ ಸೀತೆಯು ಇಲ್ಲಿ ಸ್ನಾನ ಮಾಡುತಿದ್ದಳು ಎಂಬ ಪ್ರತೀತಿ ಇದೆ. ಬೆಟ್ಟದಿಂದ ಆವೃತವಾದ ಈ ಸೀತಾಝರಿ ಕುಂಡಕ್ಕೆ ನೀರು ಎಲ್ಲಿಂದ ಬರುತ್ತದೆ, ಕುಂಡದಿಂದ ನೀರು ಎಲ್ಲಿಗೆ ಹೋಗುತ್ತದೆ ಎಂಬುದು ಯಾರಿಗೂ ತಿಳಿಯದು. ಆದರೆ, ಈ ಕುಂಡದಲ್ಲಿ ಇಡೀ ವರ್ಷ ನೀರಿರುತ್ತದೆ. ಚಿತ್ರಕೂಟದ ಜಾನಕೀಕುಂಡದಲ್ಲಿ ಕಾನುವ ವೈಚಿತ್ರ್ಯ ಇಲ್ಲಿಯೂ ಕಂಡುಬರುವುದು ಆಶ್ಚರ್ಯವನ್ನು ಉಂಟುಮಾಡುವುದಿಲ್ಲವೇ ?

ಅಶೋಕವನದಲ್ಲಿ ಒಂದು ದೊಡ್ಡ ಹೆಜ್ಜೆ ಗುರುತು ಕಾಣುತ್ತದೆ(ಚಿತ್ರ-೫). ಹನುಮಂತನು ಇಲ್ಲಿ ಸೀತೆಯೆದುರು ಯಾವ ಮಹಾಕಾರವನ್ನು ತಾಳಿದನೋ ಆಗ ಉಂಟಾದ ಹೆಜ್ಜೆಗುರುತಿದು ಎಂದು ಸ್ಥಳೀಯರು ಹೇಳುತ್ತಾರೆ. ಕಪಿಯ ಹೆಜ್ಜೆಗುರುತನ್ನೇ ಇದು ಹೋಲುತ್ತದೆ. ಪುರಾತತ್ವ ವಿಭಾಗದವರು - ಇದು ೬,೦೦೦ ವರ್ಷಗಳಿಗಿಂತಲೂ ಹಳೆಯದು ಎಂದು ಹೇಳುತ್ತಾರೆ.

ಅಶೋಕವನದ ಹತ್ತಿರದಲ್ಲಿಯೇ ಚಿನ್ಮಯ ಮಂದಿರವಿದೆ. ಅಲ್ಲಿಂದ ಕಾಣುವ ಪರ್ವತ ಶ್ರೇಣಿಯು ಮೇಲ್ಮುಖವಾಗಿ ಮಲಗಿರುವ ಹನುಮಂತನನ್ನೇ ಹೋಲುತ್ತದೆ.(ಚಿತ್ರ-೬)

ಈ ಬೆಟ್ಟದ ಮಣ್ಣಿನ ಬಣ್ಣ ಕೆಂಪು. ಆದರೆ ಅಶೋಕವನದ ಕಡೆಗಿರುವ ಪರ್ವತಭಾಗದ ಮಣ್ಣಿನ ಬಣ್ಣ ಕಪ್ಪು(ಚಿತ್ರ-೭). ಹನುಮಂತನು ಅಶೋಕವನವನ್ನು ಸುಟ್ಟಿದ್ದರಿಂದ ಇದರ ಬಣ್ಣ ಕಪ್ಪಗಿದೆ ಎಂದು ಹೇಳಲಾಗುತ್ತದೆ. ಈ ಬೆಟ್ಟದ ಪರಿಸರದಲ್ಲಿ ಇರುವ ಶಿಲೆಗಳೂ ಸುಟ್ಟ ಹಾಗೇ ಕಾಣುತ್ತವೆ. ಸ್ಥಳೀಯರು - ಈ ಪರಿಸರದಲ್ಲಿ ಇತ್ತೀಚೆಗೆ ಕಾಡ್ಗಿಚ್ಚು ಬಂದುದನ್ನು ನಾವು ಕಂಡಿಲ್ಲ, ಪೂವಿಕರು ಹೇಳುವುದನ್ನೂ ಕೇಳಿಲ್ಲ ಎಂದು ಹೇಳುತ್ತಾರೆ.

ಈ ಪರಿಸರದಲ್ಲಿರುವ ಮಂಗಗಳ ಮೈ ಬೂದುಬಣ್ಣದ್ದಾಗಿದೆ. ಆದರೆ ಅವುಗಳ ಬಾಲ ಮಾತ್ರ ಕಪ್ಪು(ಚಿತ್ರ-೮). ಅಂದರೆ, ಬಾಲ ಸುಟ್ಟ ಹನುಮಂತನನ್ನೇ ಅವು ಹೋಲುತ್ತವೆ. ಹತ್ತಿರದಿಂದ ನೋಡಿದಾಗ ಅವುಗಳ ಕಿವಿಯೂ, ತುಟಿಯೂ ಕಪ್ಪೆಂದು ತಿಳಿಯುತ್ತದೆ.

ಹನುಮಂತನು ಹಿಮಾಲಯದಿಂದ ಸಂಜೀವಿನೀ ಪರ್ವತವನ್ನು ತಂದನೆಂಬ ಕಥೆ ಪ್ರಸಿದ್ಧವಾದುದು. ಅದರ ಒಂದು ಭಾಗ ಇಲ್ಲಿ ಕಾಣುತ್ತದೆ. ವಿಮಾನ ಅಥವಾ ಹೆಲಿಕಾಫ್ಟರ್‌ದಿಂದ ನೋಡಿದಾಗ ತಿಳಿಯುವ ವಿಷಯವೆಂದರೆ - ಇಂತಹ ಪರ್ವತ ರಚನೆ ಶ್ರೀಲಂಕೆಯಲ್ಲಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.

ಈ ಪರಿಸರದಲ್ಲಿ ವಾಸ ಮಾಡುವ ಜನರು ರೋಗ ಚಿಕಿತ್ಸೆಗಾಗಿ ತರುಲತೆಗಳನ್ನೂ, ಬೇರು-ಎಲೆಗಳನ್ನೂ ಇಲ್ಲಿಂದಲೇ ಹೆಚ್ಚಾಗಿ ತೆಗೆದುಕೊಂಡು ಹೋಗುತ್ತಾರೆಂದು ಇಲ್ಲಿಗೆ ಹೋದ ಎಲ್ಲರೂ ತಿಳಿಯಬಹುದು. ಶ್ರೀಲಂಕಾದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಹರಿಂದರ್ ಸಿಖ್(ಚಿತ್ರ-೯)ರವರು ಹೀಗೆ ಹೇಳುತ್ತಾರೆ - ಈ ಸುಮೇರು ಪರ್ವತದಲ್ಲಿರುವ ಶೇ.೬೦ರಷ್ಟು ಮರಗಳು ಔಷಧೀಯ ಗುಣಗಳನ್ನು ಹೊಂದಿವೆ. ಇಂತಹ ಮರಗಳು ಹಿಮಾಲಯದಲ್ಲಿ ಮಾತ್ರ ಕಾಣಸಿಗುತ್ತವೆ. ಹೃದಯ, ಚರ್ಮ, ಮೂಳೆ, ಅಲರ್ಜಿಗೆ ಸಂಬಂಧಪಟ್ಟ ರೋಗಗಳ ಔಷಧಿಗೆ ಇಲ್ಲಿನ ಬೇರುಗಳು ವಿಶೇಷವಾಗಿ ಉಪಕಾರ ಮಾಡುತ್ತವೆ. ಈ ಪರ್ವತದಲ್ಲಿ ಸುಮೇರು ಪರ್ವತವನ್ನು ಹೊತ್ತ ಆಂಜನೇಯನ ಪ್ರತಿಮೆಯೂ ಇದೆ. ಇದು ಹೆಚ್ಚು ಜನರಿಗೆ ತಿಳಿದಿಲ್ಲ. ರಾವಣನ ಇರುವಿಕೆಯ ಬಗೆಗೆ ಸ್ಥಳಪುರಾಣಗಳೂ ಕೇಳಿಬರುತ್ತವೆ.

ರಾಮಾಯಣದ ಅಸ್ತಿತ್ವವನ್ನು ಪ್ರಮಾಣೀಕರಿಸುವ, ನಿರಾಕರಿಸಲು ಅಸಾಧ್ಯವಾದ ಆಧಾರಗಳು(ದಾಖಲೆಗಳು) ಸಿಗುತ್ತಿರುವುದು ಅತ್ಯಂತ ಸೌಭಾಗ್ಯವೇ ಸರಿ.

No comments: