Swaagatam

स्वागतम्

Wednesday, June 4, 2008

ದಲಿತರ ನಿಂದನೆ ಮಾಡಿದ ಟಿಕಾಯತ್‌ಗೆ ತಕ್ಕಪಾಠ
ಅವರು ಒಂದು ಕಾಲದಲ್ಲಿ ಉತ್ತರಪ್ರದೇಶದ ಕೋಟ್ಯಂತರ ಕೃಷಿಕರ ಅದೃಷ್ಟದ ಮೇಲೆ ಹಿಡಿತವನ್ನು ಹೊಂದಿದವರಾಗಿದ್ದರು. ಆದರೆ ಈಗ ಅವರು ತಮ್ಮ ನೆರಳಿನ ಮೇಲೇ ನಂಬಿಕೆ ಇಲ್ಲದವರಾಗಿ, ತಮ್ಮ ಅದೃಷ್ಟವನ್ನೇ ನಂಬದಿರುವಂತಾಗಿದೆ. ಮಹೇಂದ್ರ ಸಿಂಗ್ ಟಿಕಾಯತ್‌ರವರು ಎಂಭತ್ತರ ದಶಕದ ಕೊನೆಯಲ್ಲಿ ಅಹಿಂಸಾಮಾರ್ಗದ ಮೂಲಕ ಜನರನ್ನು ಒಟ್ಟುಗೂಡಿಸಿ ಅವಿಶ್ವಸನೀಯ ಅಭೂತಪೂರ್ವ ಶಕ್ತಿಯನ್ನು ಪ್ರದರ್ಶಿಸಿ ಪ್ರಸಿದ್ಧಿಗೆ ಬಂದರು. ಬಾಘಪತ್‌ನಿಂದ ಸಹರಾನ್‌ಪುರದವರೆಗಿನ ಪಶ್ಚಿಮ ಉತ್ತರಪ್ರದೇಶದ ಸುಫಲ(ಭೂಮಿಯ) ಪ್ರದೇಶದ ಜನಜೀವನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಲ್ಲಿ ಸಫಲರಾಗಿದ್ದರು. ಅವರು ಸುಮಾರು ಮೂರು ಲಕ್ಷ ಕೃಷಿಕರ ಸೈನ್ಯವನ್ನು ದೆಹಲಿಗೆ ಕೊಂಡೊಯಿದಿದ್ದರು. ಸುಮಾರು ಹದಿನೈದು ದಿನಗಳವರೆಗೆ ಅವರು ಇಂಡಿಯಾ ಗೇಟ್‌ನ ಹತ್ತಿರ ಧರಣಿಗೆ ಕುಳಿತರು. ಆ ಸಮಯದಲ್ಲಿ ಅನೇಕರು ಹೃದಯಾಘಾತದಿಂದ ನಿಧನರಾದರು. ರಾಜ್‌ಪಥ್‌ನ ಹುಲ್ಲುಗಾವಲಿನ ಆ (ಪರಿಸರವು)ಜಾಗವು ದುರ್ಗಂದ ಸೂಸುವ ದೈತ್ಯ ಸಾರ್ವಜನಿಕ ಶೌಚಾಲಯವಾಗಿ ಮಾರ್ಪಟ್ಟಿತ್ತು(ಪರಿಣಮಿಸಿತ್ತು). ಆ ವಿಶಾಲ ಕೃಷಿಸಮೂಹವು ಪೋಲೀಸರ ಒತ್ತಡವನ್ನು ಸಮರ್ಥವಾಗಿ ಎದುರಿಸಿದವು. ಆ ಸನ್ನಿವೇಶವು ಸರ್ಕಾರಕ್ಕೆ ಎಷ್ಟು ತಲೆನೋವಾಗಿ ಪರಿಣಮಿಸಿತೆಂದರೆ ಹುಕ್ಕಾ ಸೇದುವ ಆ ಉದ್ಧತ ಜಾಟ್‌ನಾಯಕನನ್ನು ದೆಹಲಿಯ ತಡೆಯನ್ನು ಹಿಂದೆಗೆದುಕೊಳ್ಳಲು ಅನುನಯಿಸಲಾಯಿತು. ಹಾಗೆ ಹೇಳುವುದಾದರೆ, ಆ ಧರಣಿಯ ನಂತರವೇ ಸರ್ಕಾರವು ಬೋಟ್‌ಕ್ಲಬ್ ಧರಣಿ ನಡೆಸುವುದನ್ನು ತಡೆಹಿಡಿಯಲಾಯಿತು. ಅಲ್ಲಿಯವರೆಗೂ ಆ ಜಾಗವು ಆಗಿನ ಕಾಲದ ರಾಜಕೀಯ ಪಕ್ಷಗಳ ಮತ್ತು ಬೇರೆ ಬೇರೆ ಉದ್ದೇಶಗಳುಳ್ಳ ಧರಣಿಗಳ ಅತ್ಯಂತ ಪ್ರೀತಿಪಾತ್ರವಾಗಿತ್ತು.
ಆದರೆ ತೊಂಭತ್ತರ ದಶಕದಲ್ಲೂ ಕೂಡ ಅವರು ತಮ್ಮನ್ನು ತಾವು ಗಾಂಧೀಜಿಯ ಅನುಯಾಯಿಯಂತೆ ಅಹಿಂಸೆಯ ಪ್ರತಿಪಾದಕರಂತೆ ಬುದ್ಧಿಪೂರ್ವಕವಾಗಿ ತೋರಿಸಿಕೊಂಡರು. ಅವರು ಉದ್ದೇಶಪೂರ್ವಕವಾಗಿ ತೀವ್ರವಾದ ಆವೇಶವನ್ನು ತಡೆದುಕೊಂಡರು. ಮತ್ತು ತಮ್ಮ ಬೆಂಬಲಿಗರಿಗೆ ದೈಹಿಕ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಲು ಆಗ್ರಹಿಸಿದರು. ಅದು ಎಷ್ಟರ ಮಟ್ಟಿಗೆಂದರೆ ತಮ್ಮ ಬೆಂಬಲಿಗರನ್ನು ಜೈಲಿನಲ್ಲಿ ಹೆಚ್ಚುಕಾಲ ಇರಿಸಲು ಅವರು ಬಯಸಿದರು. ಅವರು ಕಾಲ್ನಡಿಗೆಯಲ್ಲೇ ಪಂಚೆ ಮತ್ತು ಮಡಚಿದ ಜುಬ್ಬಾದೊಂದಿಗೆ ಆಯಾಸವಿಲ್ಲದೇ ಬಹ ದೂರ ಕ್ರಮಿಸಿದರು. ವಾಕಿಂಗ್ ಸ್ಟಿಕ್ ಅವರ ಏಕೈಕ ಸಂಗಾತಿಯಾಗಿತ್ತು. ಮತ್ತು ಅವರು ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತು ಧರಣಿಗಳನ್ನು ಹಿಂದೆಗೆದುಕೊಳ್ಳುತ್ತಿದ್ದರು. ಅವರು ಭಾಷಣಕಾರರಾಗಿರಲಿಲ್ಲ. ಆದರೂ ಟಿಕಾಯತ್‌ರವರು ತಮ್ಮ ಅತ್ಯಂತ ಸರಳತೆಯಿಂದ ತಮ್ಮ ಬೆಂಬಲಿಗರನ್ನು ಮೋಡಿಗೊಳಿಸಿದ್ದರು. ಆದರೆ ಅವರು ಜನರನ್ನು ಒಟ್ಟುಗೂಡಿಸುವ ತಂತ್ರವು ಮಾತ್ರ ಪೂರ್ತಿಯಾಗಿ ಜಾತಿವ್ಯವಸ್ಥೆಯನ್ನು ಅವಲಂಬಿಸಿತ್ತು. ಅವರು ಜಾಟ್ ಖಾಪ್ ಎಂಬ ಉಪಜಾತಿಯ ನಾಯಕರಾದರೂ ಖಾಪ್ ಜಾತಿಯ ಸಮಾನ ಬೇಡಿಕೆಗಳ ಮೂಲಕ ಅವರನ್ನೆಲ್ಲ ಒಟ್ಟುಗೂಡಿಸಿದರು.
ಪಶ್ಚಿಮ ಉತ್ತರ ಪ್ರದೇಶದ ಉನ್ನತ ಕೃಷಿ ನಾಯಕರಾದ ಚೌಧರಿ ಚರಣ್ ಸಿಂಗ್‌ರವರಾದರೋ ರಾಜಕೀಯ ಮತ್ತು ಚುನಾವಣಾ ತಂತ್ರಗಳ ಮೇಲೆ ಜನರನ್ನು ಒಟ್ಟುಗೂಡಿಸಿದರು. ಅವರು ತಮ್ಮ ಬೆಂಬಲಿಗರನ್ನು ಬೇರೆ ಬೇರೆ ರಾಜಕೀಯ ಪಕ್ಷಗಳ ಒಳಹೊರಗೆ ಸೇರುವಲ್ಲಿ ಅವರು ಕೊನೆಘಳಿಗೆಯಲ್ಲಿ ಪ್ರಧಾನಿಯಾಗುವವರೆಗೂ (ಕೆಲವು ತಿಂಗಳುಗಳವರೆಗೆ) ಸಹಾಯ ಮಾಡಿದರು. ಆದರೆ, ಟಿಕಾಯತ್‌ರವರು ವಾಣಿಜ್ಯದಿಂದ ಕೃಷಿಯ ಮೇಲಾಗುವ ಅಡ್ಡಪರಿಣಾಮಗಳ ಬಗ್ಗೆ, ಅದರಿಂದಾಗುವ ಅಭಿವೃದ್ಧಿಯ ಹಿನ್ನಡೆಯ ಬಗೆಗೆ ರ್‍ಯಾಲಿಗಳನ್ನು ಸಂಘಟಿಸಿದರು. ಪಶ್ಚಿಮ ಉತ್ತರ ಪ್ರದೇಶದ ಕೃಷಿಕ ಪ್ರಭುಗಳಲ್ಲಿ ಹೆಚ್ಚಿನವರು ಮಧ್ಯಗಾತ್ರದ ಭೂಮಿಯನ್ನು ಹೊಂದಿದವರು. ಅದು ಕೃಷಿ ಬಂಡವಾಳ ಹೆಚ್ಚುತ್ತಿದ್ದ ಶಕೆಯ ಆರಂಭವಾಗುತ್ತು. ಆಗ ಆ ಕೃಷಿಭೂಮಿಗಳ ಫಲವತ್ತತೆ ಕಡಿಮೆಯಾಗುವ ಭಯವಿತ್ತು. ಆಗ ಅವರು ಟಿಕಾಯತ್‌ರಲ್ಲಿ ಕಂಡದ್ದು ಕಾಪಾಡುವ ಭರವಸೆ. ರೂಕ್ಷ ಅಧಿಕಾರಿಗಳ ಮತ್ತು ಬಲಾತ್ಕಾರದ ವಿನಾಶದ ಪೀಡೆಯಿಂದ ಮುಕ್ತಗೊಳಿಸುವ ಮತ್ತು ಪರಿಹಾರ ದೊರಕಿಸಿಕೊಡುವ ಭರವಸೆಯನ್ನು ಅವರಿತ್ತಿದ್ದರು. ಟಿಕಾಯತ್‌ರವರ ಅದ್ಭುತ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳುವುದಾದರೆ ಕೋಪವನ್ನು ಸೂಸುವ ಮಹಾತ್ಮನಾಗಬಯಸುತ್ತಿದ್ದ ಅವರು ಎಂದೂ ಜಾತಿದ್ವೇಷ ಮತ್ತು ಭೌಗೋಳಿಕ ಪರಿಮಿತಿಯಿಂದ ಹೊರಬರಲೇ ಇಲ್ಲ ಎಂಬುದನ್ನು ಸ್ಮರಿಸಬೇಕು.
ಉದಾರೀಕರಣದ ನಂತರ, ಟಿಕಾಯತ್‌ರ ಕಾಲಾತೀತತೆಯು ಮತ್ತೆ ಮತ್ತೆ ಉಚ್ಚರಿಸಲ್ಪಡುತ್ತಿದೆ. ಕಾಲಕ್ರಮವಾಗಿ ಅವರು ತಮ್ಮ ನೆಲೆಯನ್ನು ಕಳೆದುಕೊಂಡಿದ್ದಾರೆ. ಏಕೆಂದರೆ, ಒಂದು ಕಾಲದಲ್ಲಿ ಅವರ ಬೆನ್ನೆಲುಬಾಗಿದ್ದ ಅವರ ಜಾತಿಯು ಅಭಿವೃದ್ಧಿಯನ್ನು ಸಾಧಿಸಿದೆ ಮತ್ತು ಆರ್ಥಿಕವಾಗಿ ಸುದೃಢವಾಗಿದೆ. ಅವರ ದರ್ಬಾರು ನಡೆದುದು ಅಂತಹ ಕಾಲದಲ್ಲಾಗಿತ್ತು. ಆಗಿನ ಕಾಲದಲ್ಲಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ದಲಿತರ ಜನಸಂಖ್ಯೆಯು ಉಗ್ರ ಮತ್ತು ಬಲಶಾಲಿ ಜಾಟ್‌ಗಳನ್ನು ಮೀರಿಸಲಾರದ್ದಾಗಿತ್ತು. ತೊಂಭತ್ತರ ದಶಕದ ಮಧ್ಯಭಾಗದವರೆಗೂ ಉತ್ತರ ಪ್ರದೇಶದ ಜಾಟ್‌ರ ಹೃದಯಭಾಗದಂತಿದ್ದ ಭೂಮಿಯಲ್ಲಿನ ದಲಿತರು ಮತಗಟ್ಟೆಗಳನ್ನು ದೂರದಿಂದ ಮಾತ್ರ ನೋಡಿದ್ದರು ಮತ್ತು ಒಮ್ಮೆಯೂ ಮತಪತ್ರವನ್ನು ನೋಡದವರಾಗಿದ್ದರು(ಮತವನ್ನು ಚಲಾಯಿಸಲಾರದವರಾಗಿದ್ದರು). ಆದರೂ ಅವರ ಹೆಸರಿನಲ್ಲಿನ ಮತ ಮಾತ್ರ ಚಲಾವಣೆ ಆಗಿರುತ್ತಿತ್ತು.
ರಾಮಜನ್ಮಭೂಮಿಯ ಮೂಲಕ ಬಿಜೆಪಿ ಮೇಲೆದ್ದಿತು. ಅದರಿಂದ ಇಲ್ಲಿನ ಸಾಮಾಜಿಕ ಅಸಮಾನತೆಯು ಕಡಿಮೆಯಾಗಲು ಸಹಾಯವಾಯಿತು. ಹೊರಗಿನಿಂದ ಆದರ್ಶವಾದಿಯಂತೆ ಕಾಣುವ ಆರ್ಯಸಮಾಜವು ಈ ಪ್ರದೇಶದಲ್ಲಿ ಯಾವಾಗಲೂ ಹಿಡಿತವನ್ನು ಹೊಂದಿದ್ದರೂ ಸಹ ಬಿಜೆಪಿಯ ಹಿಂದುತ್ವದ ನೆಲೆಯು ಅವರನ್ನೆಲ್ಲ ಒಟ್ಟುಗೂಡಿಸಿತು. ಹಿಂದುತ್ವದ ಕಾರಣವೊಡ್ಡಿ ಮುಸ್ಲಿಂ ನಾಯಕತ್ವ ಹೊಂದಿದ ಪ್ರದೇಶದಲ್ಲೂ ದಲಿತರು ತಮ್ಮ ಮತ ಚಲಾಯಿಸುವಂತೆ ಅವರು ನೋಡಿಕೊಂಡರು ಮತ್ತು ಜಾಟ್‌ರು ಅವರಿಗೆ ತೊಂದರೆ ಕೊಡದಿರುವಂತೆಯೂ ನೋಡಿಕೊಂಡರು. ಆಗಿನಿಂದ ಬಲಗೊಂಡ ದಲಿತರು ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಬಿಜೆಪಿಯ ಪ್ರಭಾವ ಕ್ರಮೇಣ ಕಡಿಮೆಯಾಯಿತು. ಅಜಿತ್ ಸಿಂಗ್ ತಮ್ಮ ರಾಜಕೀಯ ಪಕ್ಷಾಮತರಗಳಿಂದ ತಮ್ಮ ತಂದೆಅಜಿತ್ ಸಿಂಗ್‌ರು ಮಾಡಿದ್ದ ಜಾತಿಗಳ ನಡುವಿನ ಒಗ್ಗಟ್ಟನ್ನು ಗಾಯಗೊಳಿಸಿದರು. ಹಾಗೂ ಅದರಿಂದ ಟಿಕಾಯತ್‌ರು ಮೆಲ್ಲಗೆ ಮೂಲೆಗುಂಪಾದರು. ಮಾಯಾವತಿಯವರು ದಲಿತರ ನಿಷ್ಠೆ, ಬ್ರಾಹ್ಮಣರ ವ್ಯವಹಾರ ಮತ್ತು ಮುಸ್ಲಿಮರ ಅನ್ವೇನೆಯನ್ನು ಒಟ್ಟುಗೂಡಿಸಿ ಅದರ ಬಲದ ಮೇಲೆ ಪರ್ಯಾಯ ರಾಜಕೀಯ ಶಕ್ತಿಯನ್ನು ಸ್ಥಾಪಿಸಿದರು. ಅವರ ಸರದಿಯು ಹಾಗೆ ಶುರುವಾಯಿತು. ಉತ್ತರ ಪ್ರದೇಶದ ಮುಖ್ಯಮಂತ್ರಿಯವರು ಪಶ್ಚಿಮ ಉತ್ತರ ಪ್ರದೇಶಕ್ಕೆ ಸೇರಿದವರು. ಅವರಿಗೆ ಜಾಟ್ ಪ್ರಾಬಲ್ಯವಿರುವ ಆ ಪ್ರದೇಶದಲ್ಲೂ ಸಂಪೂರ್ಣ ಹಿಡಿತವಿದೆ. ಅವರು ಆ ಪ್ರದೇಶದ ಈಗಿನ ಅತ್ಯಂತ ಪ್ರಭಾವಿ ರಾಜಕಾರಿಣಿಯಾಗಿ ಹೊರಹೊಮ್ಮಿದ್ದಾರೆ. ಸಾಂಪ್ರದಾಯಿಕ ಕಾಂಗ್ರೆಸ್‌ವಿರೋಧಿಗಳ ಆ ಪ್ರದೇಶದಲ್ಲೂ ಅವರು ಅಜಿತ್ ಸಿಂಗ್, ಟಿಕಾಯತ್ ಮತ್ತು ಬಿಜೆಪಿಯನ್ನು ಕತ್ತಲಲ್ಲಿಡುವಲ್ಲಿ ಸಫಲರಾಗಿದ್ದಾರೆ.
ಆದರೆ ಕಳೆದ ವಾರ ಟಿಕಾಯತ್ ಮತ್ತು ಪ್ರಮುಖ ರಾಜಕೀಯ ಪಕ್ಷಗಳ ದೂರದೃಷ್ಟಿಯಿರದ ನಾಯಕರಿಂದ ಮಾಯಾವತಿಯವರು ಪಡೆದ ಲಾಭ ಮಾತ್ರ ಅನಿರೀಕ್ಷಿತ. ಕಳೆದ ದಶಕದ ಕೊನೆಯಾಗಿದ್ದರೆ(ಅವರ ಪ್ರಾಬಲ್ಯವಿದ್ದ ಆ ದಿನಗಳಲ್ಲಿ) - ಸಂವಿಧಾನಬಾಹಿರವಾದ ಮಾಯಾವತಿಯವರ ಜಾತಿಯನ್ನು ನಿಂದಿಸಿದ ಆ ತುಚ್ಛಪದಪ್ರಯೋಗದಿಂದ ಅವರು ಹೊರಬರಬಹುದಾಗಿತ್ತೇನೋ. ಆದರೆ ಅವರು ಈ ಕಠಿನ ಮಾತನಾಡಿದ್ದು ಸಾರ್ವಜನಿಕ ಸಮಾರಂಭದಲ್ಲಿ. ಇದು ಅವರ ಕಾಲವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ. ಇದಕ್ಕೆ ಬೇರೆ ಉದಾಹರಣೆಯ ಆವಶ್ಯಕತೆ ಇಲ್ಲ. ಟಿಕಾಯತ್‌ರು ವಾಣಿಜ್ಯ ಮತ್ತು ರಾಜಕೀಯ ಪರಿವರ್ತನೆಯ ಕಾಲಖಂಡದ ಬಂಧಿಯಾಗಿದ್ದಾರೆ. ಅವರ ಪೂರ್ವಸ್ಥಿತಿಯೇ ಅವರನ್ನು ಕಾಲಬಾಹಿರರನ್ನಾಗಿಸಿದೆ.
ಮಾಯಾವತಿಯವರಿಗಾದರೋ ಆ ದುಷ್ಟ ಟೀಕೆಯು ವರದಾನವಾಗಿ ಪರಿಣಮಿಸಿದೆ. ಅವರು ತಮ್ಮ ವ್ಯಕ್ತಿತ್ವವನ್ನು ದೃಢ ಮತ್ತು ಚೌಕಾಶಿ ಮಾಡಿಕೊಳ್ಳದ ನಾಯಕರಾಗಿ, ದಲಿತ ಸ್ವಾಭಿಮಾನಿಯಾಗಿ ಗುರುತಿಸಿಕೊಂಡಿದ್ದಾರೆ. ಆರು ಸಾವಿರದಷ್ಟು ಪೋಲೀಸರನ್ನು ಟಿಕಾಯತ್‌ರ ಮನೆಯ ಸುತ್ತಲೂ ನಿಯುಕ್ತಿಗೊಳಿಸಿದ ಅವರು ಸಮಯ ಬಂದರೆ ಕಮ್ಯಾಂಡೋಗಳನ್ನು ಕರೆಸಿ ಬಂಧಿಸುವ ಸುಳಿವನ್ನೂ ನೀಡಿದರು. ಹಾಗೆ ಮಾಡುವ ಮೂಲಕ ಅವರುದಲಿತರ ಪ್ರಜ್ಞೆಯನ್ನು ಬಲಗೊಳಿಸಿದರು. ರೂಕ್ಷವಾದ ಅಂತಹ ದಲಿತರ ವಿರುದ್ಧದ ಜಾತಿನಿಂದನೆಯ ಕಾಯಿದೆಯನ್ನು ಹೇರಿದ ಮಾಯಾವತಿಯವರ ವಿರುದ್ಧ (ಟಿಕಾಯತ್‌ರ ಪರ) ಅಂತಹ ಕ್ರಮವನ್ನು ವಿರೋಧಿಸಿದ ರಾಜಕೀಯ ಪಕ್ಷಗಳು ವಿಶೇಷವಾಗಿ ಕಾಂಗ್ರೆಸ್ ಮಾಯಾವತಿಯವರಿಗೆ ಲಾಭವನ್ನೇ ತಂದುಕೊಟ್ಟಿತು. ಟಿಕಾಯತ್‌ರ ಅಂತಹ ಹೇಯ ಪದಬಳಕೆಯ ಪರ ಯಾರೂ ಇರಕೂಡದು. ಅದು ರಾಜಕೀಯವಾಗಿ ತಪ್ಪು. ಅಷ್ಟೇ ಅಲ್ಲದೇ ಒಳಿತನ್ನು ಬಯಸುವ ಪ್ರತಿಯೊಬ್ಬ ಭಾರತೀಯನೂ ಅಂತಹ ಜಾತಿ-ಅವಹೇಳನವನ್ನು ಖಂಡಿಸಲೇಬೇಕು.
ಮಾಯಾವತಿಯವರು ದಲಿತರು, ಬ್ರಾಹ್ಮಣರು ಹಾಗೂ ಮುಸ್ಲಿಮರ ಮಧ್ಯೆ ಸಾಮಾಜಿಕ ಬಂಧವನ್ನು ಉಂಟುಮಾಡಿ ಸರ್ಕಾರವನ್ನು ರಚಿಸಿದ್ದಾರೆ. ಈ ಹಂತದಲ್ಲಿ ರಾಜಕೀಯ ಪಕ್ಷಗಳು ಅರ್ಥಮಾಡಿಕೊಳ್ಳಬೇಕಾದ ಸಂಗತಿಯೆಂದರೆ ಹಳೆಯ ಮನಸ್ಥಿತಿಯು ಬದಲಾಗಿದೆ. ಹಾಗೆಯೇ ಮೇಲ್ಜಾತಿಯವರು, ತಮ್ಮ ಆಶೋತ್ತರಗಳು ಈಡೇರಿದರೆ ದಲಿತ ನಾಯಕತ್ವವನ್ನೂ ಒಪ್ಪಿಕೊಳ್ಳಲು ತಯಾರಾಗಿದ್ದಾರೆ. ದಲಿತರನ್ನು ಈಗಲೂ ದೈಹಿಕವಾಗಿ ಮತ್ತು ರಾಜಕೀಯವಾಗಿ ಅಸ್ಪೃಶ್ಯರೆಂದು ಹೇಳುವವರು ತಾವೇ ಅಸ್ಪೃಶ್ಯರಾಗಿದ್ದಾರೆ.
ಈ ಘಟನೆಯಿಂದ ಮಾಯಾವತಿಯವರು ಗುಟ್ಟಾಗಿ ತಮ್ಮ ಬಗ್ಗೆ ಮಾತನಾಡುತ್ತಿದ್ದ ದಲಿತರನ್ನು ಸುಮ್ಮನಾಗಿಸುವಲ್ಲಿ ಸಫಲರಾಗಿದ್ದಾರೆ. ಆ ದಲಿತರ ಆರೋಪವೆಂದರೆ ಉತ್ತರಪ್ರದೇಶದ ಅಧಿಕಾರದ ಸಿಂಹಪಾಲನ್ನು ಬ್ರಾಹ್ಮಣರೇ ಪಡೆದಿದ್ದಾರೆ ಎಂಬುದು. ಬೇರೆ ಪಕ್ಷಗಳಿಗೆ ಸಮಾಜದ ನಾಡಿಮಿಡಿತದ ಅರಿವಿದ್ದಿದ್ದರೆ ಮಾಯಾವತಿಯವರಿಗಿಂತಲೂ ಹೆಚ್ಚಾಗಿ ಅವರು ಟಿಕಾಯತ್‌ರನ್ನು ಖಂಡಿಸಬೇಕಿತ್ತು. ಮತ್ತು ಮಧುರವಾದ ಸಂಧಿಯ ಮೂಲಕ ಬಂಧಿಸುವ ಬದಲಾಗಿ ಶರಣಾಗುವಂತೆ ಮಾಡಬಹುದಾಗಿತ್ತು. ಹಾಗೆ ಮಾಡದಿದ್ದುದರಿಂದಲೇ ಮಾಯಾವತಿಯವರು ಪೂರ್ಣ ಬಲದಿಂದ ನಿಂತಿದ್ದಾರೆ ಮತ್ತು ಅವರು ತಮ್ಮ ಕೀರ್ತಿಶಿಖರದ ಔನ್ನತ್ಯದಲ್ಲಿದ್ದಾರೆ. ಟಿಕಾಯತ್‌ರ ನೆಲೆಯು ಕ್ಷೀಣಿಸುತ್ತಿರುವುದನ್ನು ನೋಡಿದರೆ ಈ ಅವಮಾನಕರ ಘಟನೆಯ ನಂತರ ದಲಿತೇತರರೆಲ್ಲ ಒಂದಾಗುವರು ಎಂದೇನೂ ಇಲ್ಲ. ಸಿಸೌರಿ ಘಟನೆಯ ನಂತರ ಪಶ್ಚಿಮ ಉತ್ತರ ಪ್ರದೇಶದಲ್ಲಿ ಕೋಮುಸೌಹಾರ್ದ ಕದಡಿದರೆ ಅದಕ್ಕೆ ಕಾರಣರು ಮತ್ತು ಫಲಾನುಭವಿಗಳು ಜಾಟ್‌ರೇ ಆಗುತ್ತಾರೆ. ಮಾಯಾವತಿಯವರು ಸ್ವಲ್ಪಕಾಲದ ಹಿಂದೆ ಅರಿತುಕೊಂಡ ಸಂಗತಿಯೆಂದರೆ - ಶೇಕಡಾ ನೂರರಷ್ಟು ದಲಿತರು ಅವರ ನಾಯಕತ್ವದಲ್ಲಿ ಒಟ್ಟುಗೂಡಿದರೂ ೨೫ % ಸ್ಥಾನಗಳನ್ನೂ ಅವರು ಪಡೆಯಲು ಸಾಧ್ಯವಿಲ್ಲ. ಆದರೆ ಅದೇ ಕುಶಲವಾದ ಜಾತಿ-ಐಕ್ಯದಿಂದ ೫೦% ಗಿಂತ ಹೆಚ್ಚು ಸ್ಥಾನಗಳನ್ನು ಪಡೆಯಬಹುದು. ಕಳೆದ ಚುನಾವಣೆಯಲ್ಲಿ ಆದದ್ದೂ ಅದೇ. ಸಮ್ಮಿಶ್ರ ಸರ್ಕಾರಗಳ ಈ ಕಾಲದಲ್ಲಿ ಯಾವ ಜಾತಿಯೊಂದರಿಂದಲೂ ಪೂರ್ಣವಾದ ಅಧಿಕಾರ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಮನಗಾಣಬೇಕು.
(ಆಂಗ್ಲ ಮೂಲ - ಚಂದನ್ ಮಿತ್ರಾ)