೧೦೭ ಸೈನ್ಯಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆರನೇ ವೇತನ ಆಯೋಗದ ವರದಿಯೇ ಇದಕ್ಕೆ ಕಾರಣ. ಈಗಾಗಲೇ ಸೈನ್ಯಾಧಿಕಾರಿಗಳ ಸಂಖ್ಯೆ ಕಡಿಮೆಯಾಗಿರುವಾಗ ಈ ೧೦೭ ಅಧಿಕಾರಿಗಳ ರಾಜೀನಾಮೆ, ಗಾಯದ ಮೇಲೆ ಬರೆ ಎಳೆದಂತಾಗಿದೆ. ವೇತನ ಆಯೋಗದ ವರದಿಯು ಮಾರ್ಚ್ ೨೪ರಂದು ಹೊರಬಿದ್ದ ಬೆನ್ನಲ್ಲೇ ಅವರ ಈ ನಿರ್ಧಾರ ಹೊರಬಿದ್ದಿದೆ. ಈ ೧೦೭ ಜನ ಯಾರೋ ಕೆಲವು ಸೈನಿಕರಲ್ಲ. ಅವರೆಲ್ಲ ಜವಾಬ್ದಾರಿಯುತ ಕರ್ನಲ್, ಲೆಫ್ಟಿನೆಂಟ್ ಕರ್ನಲ್ ಮುಂತಾದವರು. ಅವರು ಈ ಶೇಕಡಾ ೧೫ರ ಜುಜುಬಿ ಹೆಚ್ಚಳದಿಂದ ತೃಪ್ತಿಗೊಂಡಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳುತ್ತಾರೆ.
ಸಹಜವಾದ ಸಂದರ್ಭದಲ್ಲಿ ಒಂದು ವಾರದಲ್ಲಿ ಎರಡರಿಂದ ನಾಲ್ಕು ಜನ ತಮ್ಮ ಅವಧಿಪೂರ್ವ ರಾಜೀನಾಮೆಯನ್ನು ಸಲ್ಲಿಸುತ್ತಿದ್ದರು. ಆದರೆ, ಕಳೆದ ಎರಡು-ಮೂರು ವಾರಗಳಿಂದ ಆ ಸಂಖ್ಯೆ ಹತ್ತರಿಂದ ಹದಿನೈದಕ್ಕೇರಿದೆ. ಭಾರತೀಯ ಸೈನ್ಯವು ಈಗಾಗಲೇ ೧೧,೦೦೦ ಸೈನ್ಯ ಅಧಿಕಾರಿಗಳ ಅಭಾವವನ್ನು ಎದುರಿಸುತ್ತಿದೆ. ವಾಯುಸೇನೆಯಲ್ಲಿ ೬,೦೦೦ ಮತ್ತು ನೌಕಾಪಡೆಯಲ್ಲಿ ೪,೦೦೦ ಅಧಿಕಾರಿಗಳು ಕಡಿಮೆಯಿದ್ದಾರೆ. ೨೫ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾದ ಗುಂಪಿನಲ್ಲಿ ಈಗ ಕೇವಲ ೧೨-೧೪ ಅಧಿಕಾರಿಗಳಷ್ಟೇ ಇರುವುದು ಬೇಸರದ ಸಂಗತಿ.
ಹಾಗಾದರೆ, ಅವರು ಈಗಿನ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬ ಪ್ರಶ್ನೆ ಏಳುತ್ತದೆ. ಅದಕ್ಕೆ ಮೇಜರ್ ಜನರಲ್ ಒಬ್ಬರು ಹೀಗೆ ಉತ್ತರಿಸುತ್ತಾರೆ - ನಮ್ಮಲ್ಲಿ ನೀಡಲಾಗುವ ನಾಯಕತ್ವದ ತರಬೇತಿಯೇ ಅತ್ಯಂತ ವಿಶಿಷ್ಟವಾದುದು. ನಮ್ಮಲ್ಲಿ ಒಂದು ದರ್ಜೆ ಕೆಳಗೆ ಮತ್ತು ಒಂದು ದರ್ಜೆ ಮೇಲಿನ ಎಲ್ಲ ಕೆಲಸಗಳನ್ನು ಎಲ್ಲರಿಗೂ ಕಲಿಸಿಕೊಡಲಾಗುತ್ತದೆ. ಆದರೆ ಇಂತಹ ಕ್ರಮದ ಅನ್ವಯವಾಗುವುದು ಯುದ್ಧದ ಸಮಯದಲ್ಲಿಯೇ. ಅದು ಇದೀಗ ಸಹಜ ಸಂದರ್ಭದಲ್ಲೂ ಅನ್ವಯವಾಗುತ್ತಿರುವುದು ಬೇಸರದ ಸಂಗತಿ.
ಮೇಜರ್ ಅಮರ್ ಖ್ವಾತ್ರಾರವರು ಒಂಭತ್ತು ವರ್ಷಗಳು ಸೈನ್ಯದಲ್ಲಿದ್ದು ನಂತರ ರಾಜೀನಾಮೆ ನೀಡಿದರು. ಇವರು ಸ್ವಾತಂತ್ರ್ಯೋತ್ತರ ಭಾರತೀಯ ಸೈನ್ಯದ ನಾಲ್ಕನೇ ತಲೆಮಾರಿನವರು. ಇವರು ಸೇನಾಪದಕವನ್ನೂ ಪಡೆದಿದ್ದಾರೆ. ತಮ್ಮ ಪಾಲಿನ ಕರ್ತವ್ಯ ನಿಭಾಯಿಸಿದ ಬಗೆಗೆ ಅವರಿಗೆ ತೃಪ್ತಿಯಿದೆ. ಅವರು ಹೀಗೆ ಹೇಳುತ್ತಾರೆ - ನಾವು ಯಾವತ್ತೂ ದುಡ್ಡಿಗಾಗಿ ಸೈನ್ಯ ಸೇರಿದವರಲ್ಲ. ನಾವು ಗೌರವಕ್ಕಾಗಿ ಸೈನ್ಯವನ್ನು ಸೇರಿದ್ದೇವೆ. ಆದರೆ ನಮಗೂ ನಮ್ಮದೇ ಆದ ಜೀವನಪದ್ಧತಿಯಿದೆ. ನಾನು ನನ್ನ ಮಕ್ಕಳನ್ನು ಒಳ್ಳೆಯ ಶಾಲೆಗೆ ಕಳುಹಿಸಲು ಬಯಸಿದರೆ ಅದು ಮೇಜರ್‌ನ ಸಂಬಳದಿಂದಾಗದು.
ಆರನೇ ವೇತನ ಆಯೋಗವು ಅಧಿಕಾರಶಾಹಿ ಮತ್ತು ಸೇನೆಯನ್ನು ಎರಡು ವೇತನಶ್ರೇಣಿಗಳಲ್ಲಿ ವಿಂಗಡಿಸಿದೆ. ಸೇನೆಯಲ್ಲಿ ಬ್ರಿಗೇಡಿಯರ್ ಮತ್ತು ಅಧಿಕಾರಿವರ್ಗದಲ್ಲಿ ನಿರ್ದೇಶಕರವರೆಗಿನ ಗುಂಪು ಕಡಿಮೆ ವೇತನ ಶ್ರೇಣಿಯದು. ಈ ವರದಿಯ ಶಿಫಾರಸ್ಸಿನಂತೆ ೨೬ವರ್ಷ ಅನುಭವವಿರುವ ಬ್ರಿಗೇಡಿಯರ್, ಕೇವಲ ೧೫ವರ್ಷ ಅನುಭವವಿರುವ ಅಧಿಕಾರಿಯ ಸಂಬಳವನ್ನಷ್ಟೇ ಪಡೆಯುತ್ತಾನೆ. ಹಾಗೆಯೇ, ೩೨ ಸುದೀರ್ಘ ವರ್ಷಗಳ ಅನುಭವದ ನಂತರ ಮೇಜರ್ ಜನರಲ್ ಪಡೆಯುವುದು, ೨೦ ವರ್ಷ ಕೆಲಸ ಮಾಡಿದ ಜಾಯಿಂಟ್ ಸೆಕ್ರೆಟರಿಯಷ್ಟೇ ಸಂಬಳ. ಈ ಅಸಮಾನತೆಗೆ ಕಾರಣವೇನು ?
ದಶಕದ ಹಿಂದೆ ಐದನೇ ವೇತನ ಆಯೋಗವು ತನ್ನ ವರದಿಯನ್ನು ಸಲ್ಲಿಸಿದಾಗ ಆಂತರಿಕ ದಂಗೆಯೇ ಉಂಟಾಗಿತ್ತು. ಆಗಿನ ಆಯೋಗವು ಯುದ್ಧ ವಿಮಾನ ಚಾಲಕರಿಗೆ ರೂ.೧೦,೦೦೦/- ವಿಶೇಷ ಭತ್ಯೆಯನ್ನು ಪ್ರಕಟಿಸಿತು. ಈಶಾನ್ಯ ದಿಕ್ಕಿನ ಕೆಟ್ಟ ಹವೆಯಲ್ಲಿ ಮತ್ತು ಸಿಯಾಚಿನ್‌ನಂತಹ ಪ್ರದೇಶದ ಮೇಲೆ ಹಾರಾಡುವ ಸಾರಿಗೆ ವಿಮಾನ ಚಾಲಕರು ಹಾರಾಟವನ್ನು ಬಹಿಷ್ಕರಿಸಿ ಏರ್‌ಮಾರ್ಷಲ್‌ಗಳನ್ನು ಸುತ್ತುವರಿದು ಆಗ ಪ್ರತಿಭಟಿಸಿದ್ದರು.
ಆರನೇ ವೇತನ ಆಯೋಗವು ತನ್ನ ವರದಿಯನ್ನು ಸಲ್ಲಿಸಿರುವ ಈ ಸಮಯದಲ್ಲಿ ಸೈನ್ಯದ ಪ್ರತಿಯೊಬ್ಬರೂ ಎದ್ದುನಿಂತಿದ್ದಾರೆ. ತಮ್ಮ ಸ್ಥಿತಿ ಉತ್ತಮಗೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದ ಅಸಂಖ್ಯ ಅಧಿಕಾರಿಗಳು ತಮ್ಮ ಅವಧಿಪೂರ್ವ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಈಗ ಸ್ಥಿತಿಯು ಹಿಂದಿನಂತಿರದೇ ಬಹಳ ಬದಲಾಗಿದೆ. ಹತ್ತು ವರ್ಷದ ಹಿಂದಿನ ಕತೆಯನ್ನು ಹೇಳುವುದಾದರೆ ಆಗಿನ ರಕ್ಷಣಾಸಚಿವರಾದ ಮುಲಾಯಂ ಸಿಂಗ್ ಯಾದವ್‌ರವರು ಪರಿಸ್ಥಿತಿಯ ಪರಿಶೀಲನೆಗೆ ಸಮಿತಿಯನ್ನು ರಚಿಸಿದ್ದರು ! ಮತ್ತು ಮಾಧ್ಯಮದವರನ್ನು - ಇದನ್ನು ದಂಗೆ ಎಂದು ಕರೆಯಬಾರದೆಂದು ವಿನಂತಿಸಿದರು. ಈಗ ಹಾಗಾಗಿಲ್ಲ. ಈ ರಾಜೀನಾಮೆಯ ವಿಷಯ ತಿಳಿದ ಕೂಡಲೇ ರಕ್ಷಣಾ ಸಚಿವ ಎ.ಕೆ. ಎಂಟನಿಯವರು ಮೂರೂ ಸೇನಾಧಿಕಾರಿಗಳ ಸಭೆಯನ್ನು ಕರೆದಿದ್ದಾರೆ. ಆದರೆ, ಇದು ಕೇವಲ ಕಣ್ಣೊರೆಸುವ ತಂತ್ರವಾಗಬಾರದು.
ಈಗಿನ ರೋಷ ಬಲವಾಗಿದೆ. ಹಿಂದೆಯಾದರೆ ಅದು ಹೊಸ ಆರ್ಥಿಕತೆಯ ಶಕೆಯ ಆರಂಭವಷ್ಟೇ ಆಗಿತ್ತು. ಆಗಿನ್ನೂ ಸೇನಾಧಿಕಾರಿಗಳು ತಮ್ಮ ಕಡಿಮೆ ಸಂಬಳದ ಬಗೆಗೆ ದನಿ ಎತ್ತುವವರಾಗಿರಲಿಲ್ಲ. ಆದರೆ ಈಗಿನ ಸಾಫ್ಟ್‌ವೇರ್ ಇಂಜಿನಿಯರ್‌ಗಳ ವಿದೇಶ ಪ್ರವಾಸ, ಪಡೆಯುವ ಭತ್ಯೆಗಳು ಅವರ ಕಣ್ಣು ಕುಕ್ಕಿವೆ. ಈಗಿನ ಸ್ಥಿತಿ ಹೇಗಿದೆಯೆಂದರೆ, ಒಬ್ಬ ಲೆಫ್ಟಿನೆಂಟ್ ಕರ್ನಲ್‌ನ ವಾರ್ಷಿಕ ವೇತನ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್‌ನ ಆರಂಭಿಕ ಮಾಸಿಕ ವೇತನಕ್ಕೆ ಸಮನಾಗಿದೆ. ಅಂದರೆ, ಅವರಿಗಿಂತ ಹೆಚ್ಚು ಯೋಗ್ಯನಾದ ಲೆಫ್ಟಿನೆಂಟ್‌ನ ಅತ್ಯಂತ ಅವಶ್ಯಕತೆಯಾದ ಊಟಕ್ಕೂ ದುಡ್ಡು ಸಾಲದಾಗಿದೆ.
ಲೆಫ್ಟಿನೆಂಟ್ ಜನರಲ್, ಜನರಲ್ ಮತ್ತು ಅದಕ್ಕೆ ಸಮನಾದ ತ್ರೀ ಸ್ಟಾರ್/ ಫೋರ್ ಸ್ಟಾರ್ ಅಧಿಕಾರಿಗಳ ವೇತನ ಶ್ರೇಣಿಯ ಹೆಚ್ಚಳದ ಬಗೆಗೆ ಅವರಿಗೆ ಯಾವುದೇ ರೀತಿಯ ತಕರಾರಿಲ್ಲ. ಅವರಿಗೆ ಸಿಗುವ ಗೌರವ ಅವರ ಕಡಿಮೆ ಸಂಬಳವನ್ನು ಮರೆಸುತ್ತದೆ. ಆದರೆ, ಸಮಸ್ಯೆಯಿರುವುದೇ ಮಧ್ಯದ ಶ್ರೇಣಿಯಲ್ಲಿ. ಅವರ ಸ್ಥಿತಿ ಹೇಗಿರುತ್ತದೆಂದರೆ - ಆ ಅಧಿಕಾರಿಯು ತರುಣನಾಗಿರುತ್ತಾನೆ. ಮದುವೆ ಆಗಿರುತ್ತದೆ. ಮನೆಯಲ್ಲಿ ಬೆಳೆಯುವ ಮಕ್ಕಳಿರುತ್ತಾರೆ. ಆದರೆ ಅವರಿಗೆ ಸಿಗುವ ಸಂಬಳ ಊಟಕ್ಕೇ ಸಾಲುವುದಿಲ್ಲ.
ಹಾಗೆಯೇ, ಆರನೇ ವೇತನ ಆಯೋಗದ ಈ ಶಿಫಾರಸ್ಸು ಅತ್ಯಂತ ಅತಾರ್ಕಿಕವಾಗಿದೆ. ಏಕೆಂದರೆ, ಅಧಿಕಾರಿವರ್ಗದವರು ಸೈನ್ಯದವರಿಗಿಂತ ಬೇಗನೇ ಪದೋನ್ನತಿಯನ್ನು(ಪ್ರಮೋಷನ್) ಪಡೆಯುತ್ತಾರೆ. ಹಾಗಾಗಿ ಆ ಅಧಿಕಾರಿ ವರ್ಗದವರು ಬೇಗನೇ ಎರಡನೇ ವೇತನ ಶ್ರೇಣಿಗೆ ಜಿಗಿಯುತ್ತಾರೆ. ಸಿವಿಲ್ ಸರ್ವಿಸ್‌ನಲ್ಲಿರುವವರು ಕಡಿಮೆಯೆಂದರೂ ನಿವೃತ್ತರಾಗುವಷ್ಟರಲ್ಲಿ ಅಡಿಷನಲ್ ಸೆಕ್ರೆಟರಿ ಅಥವಾ ಜನರಲ್ ಸೆಕ್ರೆಟರಿ ಆಗಿರುತ್ತಾರೆ. ಆದರೆ, ಸೈನ್ಯದಲ್ಲಿನ ಬಹುಪಾಲು ಅಧಿಕಾರಿಗಳು ಜಾಯಿಂಟ್ ಸೆಕ್ರೆಟರಿ(ಮೇಜರ್ ಜನರಲ್) ಅಥವಾ ಅದಕ್ಕೆ ಸರಿಸಮನಾದ ಹುದ್ದೆಯನ್ನೂ ತಮ್ಮ ವೃತ್ತಿಜೀವನದ ಅಂಚಿಗೆ ಪಡೆಯುವುದಿಲ್ಲ. ಎರಡನೆಯದಾಗಿ, ಅಧಿಕಾರಿಗಳು ೬೦ ವರ್ಷಕ್ಕಿಂತ ಬೇಗ ನಿವೃತ್ತರಾಗುವುದಿಲ್ಲ. ಆದರೆ ಈ ಸೈನಾಧಿಕಾರಿಗಳು ೫೬ಕ್ಕೇ ಬಿಡಲು ಶುರುಮಾಡಿರುತ್ತಾರ. ಆದ್ದರಿಂದ, ಅವರು ಮುಂದಿನ ಶ್ರೇಣಿಯನ್ನು ಪಡೆಯಲಾಗುವುದಿಲ್ಲ. ಹೀಗೆ ವಾದ ಮುಂದೆ ಸಾಗುತ್ತದೆ. ಆದ್ದರಿಂದ, ಅವರು - ಆಫೀಸರ್‌ಗಳಿಗೆ ಮೂರು, ಅದರ ಕೆಳಗಿನವರಿಗೆ ಮೂರು - ಹೀಗೆ ಆರು ವೇತನ ಶ್ರೇಣಿಗಳನ್ನು ಬಯಸುವುದು ಸಹಜವಾಗಿದೆ.
ಸಣ್ಣ ಸಣ್ಣ ಅಗತ್ಯಗಳ(ವಸ್ತುಗಳ) ಬೆಲೆ ಹೆಚ್ಚುತ್ತಿರುವ ಈ ಕಾಲದಲ್ಲೂ ಅವರಿಗೆ ಪುಡಿಗಾಸು ನೀಡಲಾಗುತ್ತಿದೆ. ಉದಾಹರಣೆಗಾಗಿ - ಸೈನಿಕರು ತಿಂಗಳಿಗೆ ಎರಡು ಸಾರಿ ಕೂದಲು ಕತ್ತರಿಸಲು ಅಂಗಡಿಗೆ ಹೋಗುತ್ತಾರೆ. ಅವರು ಅದಕ್ಕೆ ಇಲ್ಲಿಯವರೆಗೂ ರೂ ೧೦/- ಪಡೆಯುತ್ತಿದ್ದರು. ಈಗ ಅದು ರೂ. ೨೦/- ಕ್ಕೆ ಏರಿದೆ. ಮುಂದಿನ ಬಾರಿ ಅಂಗಡಿಯೆದುರಿಗೆ ಗಾಡಿ ನಿಲ್ಲಿಸುವ ಪಾರ್ಕಿಂಗ್ ಶುಲ್ಕಕ್ಕಾಗಿ ಹತ್ತು ರೂಪಾಯಿ ಹೆಚ್ಚು ಕೇಳಬೇಕು ಎಂದು ವಿಷಾದದಿಂದ ಸೈನಾಧಿಕಾರಿಯೊಬ್ಬರು ಹೇಳಿರುವುದು ಅವರ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಏನೂ ಕೆಲಸ ಮಾಡದ ಬೇರೆ ಕೇಂದ್ರ ಸರ್ಕಾರಿ ನೌಕರರ(ಇದರಲ್ಲಿ ಅಪವಾದಗಳಿರಬಹುದು) ವೇತನವನ್ನು ಬೇಕಾಬಿಟ್ಟಿ ಹೆಚ್ಚಿಸಿ ದೇಶ ಕಾಯುವ ಇವರನ್ನು ಕತ್ತಲಲ್ಲಿಟ್ಟಿರುವುದರ ಅರ್ಥ ಏನು ? ಇದರ ಹಿಂದೆ ಯಾರದ್ದಾದರೂ ಕೈವಾಡವಿರಬಹುದೇ !?